Sunday, September 13, 2009
ವಿಶ್ವಮಂಗಲ ಗೋಗ್ರಾಮಯಾತ್ರೆ, ಹಾಸನ ಜಿಲ್ಲಾ ಸಮಿತಿ
ಸಮಿತಿಯ ಕಾರ್ಯಾಧ್ಯಕ್ಷರಾದಶ್ರೀ ಪ್ರಕಾಶ್.ಎಸ್.ಯಾಜಿ,ಇವರಿಂದ ಗೋ ಪೂಜೆ.
ಹಾಸನ ತಹಸಿಲ್ದಾರ್ ಮತ್ತು ತಾಲ್ಲೂಕ್ ದಂಡಾಧಿಕಾರಿಗಳಾದ ಶ್ರೀ ರುದ್ರಪ್ಪಾಜಿರಾವ್
ಇವರಿಂದ ವಿಶ್ವ ಮಂಗಲ ಗೋಗ್ರಾಮ ಜಿಲ್ಲಾ ಸಂಚಾಲನಾ ಸಮಿತಿ ಯ ಉದ್ಘಾಟನೆ:-
ರೈತನ ಬಾಳು ಹಸನಾಗಬೇಕಾದರೆ ಗೋವುಗಳನ್ನು ರಕ್ಷಿಸಬೇಕೆಂದು ಹಾಸನ ತಹಸಿಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಗಳಾದಂತಹ ಶ್ರೀ ರುದ್ರಪ್ಪಾಜಿರಾವ್,ಅವರು ಹೇಳಿದ್ದಾರೆ. ಶ್ರೀಯುತರು ಇಂದು ಹಾಸನದ ತಣ್ಣೀರುಹಳ್ಲ ಮಠದಲ್ಲಿ ನಡೆದ ವಿಶ್ವಮಂಗಲ ಗೋಗ್ರಾಮಯಾತ್ರೆಯ ಹಾಸನ ಜಿಲ್ಲಾ ಸಮಿತಿಯನ್ನು ಉದ್ಘಾಟಿಸುತ್ತಾ ಮೇಲಿನಂತೆ ನುಡಿದಿದ್ದಾರೆ. ಇಂದು ರೈತರು ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ವಲಸೆ ಬರುತ್ತಿರುವುದನ್ನು ತಡೆದು ಗ್ರಾಮಗಳನ್ನು ರಕ್ಷಿಸುವ ಉದ್ಧೇಶದಿಂದ ಆಯೋಜಿಸಿರುವ ಯಾತ್ರೆಗೆ ಶುಭವಾಗಲೆಂದು ಹರಸುತ್ತಾ ಹಾಸನ ತಾಲ್ಲೂಕಿಗೆ ಯಾತ್ರೆಯು ಬಂದಾಗ ಅದಕ್ಕೆ ಪೂರ್ಣ ಸಹಕಾರಕೊಡುವುದಾಗಿ ನುಡಿದರು.
ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಪ್ರಕಾಶ್.ಎಸ್.ಯಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅನಂತನಾರಾಯಣ್, ಇವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ಮನುಷ್ಯನ ಬದುಕಿಗೆ ಗೋವಿನ ಮಹತ್ವವನ್ನು ತಿಳಿಸಿ, ಸಮಾಜದ ಮೇಲೆ ಇಂದಿನ ಭೋಗ ಜೀವನದ ದುಷ್ಪರಿಣಾಮಗಳನ್ನು ಎಳೆ ಎಳೆಯಾಗಿ ವಿವರಿಸಿದರು. ಗೋವುಗಳ ನಾಶದಿಂದ ರೈತರು ರಾಸಾಯನಿಕ ಗೊಬ್ಬರಗಳನ್ನು ಹಾಗೂ ಕ್ರಿಮಿನಾಶಗಳನ್ನು ಬಳಸಿ ಬೆಳೆ ಬೆಳೆಯ ಬೇಕಾದ ಪರಿಸ್ಥಿತಿ ಬಂದು ಅದರಿಂದ ಆಗುತ್ತಿರುವ ಹಾನಿಯನ್ನು ತಿಳಿಹೇಳಿದರು.
ಮೈಸೂರು ವಿಭಾಗ ಸಂಯೋಜಕರಾದ ಶ್ರೀ ಸತ್ಯನಾರಾಯಣ ರವರು ಮಾತನಾಡುತ್ತಾ “ ಸ್ವಾತಂತ್ರ್ಯಾ ನಂತರ ಅತೀ ದೊಡ್ಡ ಪ್ರಮಾಣದಲ್ಲಿ ಅಭಿಯನ ಒಂದು ಶುರುವಾಗಿ ದೇಶದ ಐವತ್ತು ಕೋಟಿ ಜನರಿಂದ ಸಹಿಯನ್ನು ಸಂಗ್ರಹಿಸಿ ದೇಶದಲ್ಲಿ ಗೋ ರಕ್ಷಣೆಗಾಗಿ ಪ್ರತ್ಯೇಕ ಕಾನೂನು ಮಾಡಬೇಕೆಂದೂ ಹಾಗೂ ಗೋ ರಕ್ಷಣೆಗಾಗಿಯೇ ಪ್ರತ್ಯೇಕ ಸಚಿವಾಲಯ ತೆರೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು” ಎಂದರು. ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಹಿಸಂಗ್ರಹ ಅಭಿಯಾನ ಹಾಗೂ ರಥಯಾತ್ರೆಯ ವಿವರವನ್ನು ತಿಳಿಸುತ್ತಾ ಅಕ್ಟೋಬರ್ ಮಾಸದಲ್ಲಿ ಕಾರ್ಯಕರ್ತರು ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎಲ್ಲಾಗ್ರಾಮಗಳಲ್ಲೂ ಪ್ರತಿ ಮನೆಗೆ ಭೇಟಿಕೊಟ್ಟು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರಿಂದ ಸಹಿಸಂಗ್ರಹ ಮಾಡಲಾಗುವುದೆಂದು ತಿಳಿಸಿದರು.
ವೇದಿಕೆಯ ಮೇಲೆ ಗೋಮಾತೆ ಹಾಗೂ ಭಾರತ ಮಾತೆಯ ಚಿತ್ರದ ಹೊರತಾಗಿ ಯರೂ ಆಸೀನರಾಗಿರದೆ ಗಣ್ಯರೂ ಕೂಡ ಸಭಿಕರೊಡನೆ ಕುಳಿತಿದ್ದುದು ಸಭೆಯ ವೈಶಿಷ್ಠ್ಯ ವಾಗಿತ್ತು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಂದ ಬಂದಿದ್ದ ಆಯ್ದ ಸುಮಾರು ಮುನ್ನೂರು ಜನ ಕಾರ್ಯಕರ್ತರು ಪಾಲ್ಗೊಂಡು ಸಹಿಸಂಗ್ರಹ ಅಭಿಯಾನ ಹಾಗೂ ಗೋ ಗ್ರಾಮ ಯಾತ್ರೆಯನ್ನು ವ್ಯವಸ್ಥಿತವಾಗಿ ನಡೆಸಲು ಯೋಜನೆ ರೂಪಿಸಿದರು. ಪ್ರಾರಂಭದಲ್ಲಿ ಜಿಲ್ಲಾ ಮಾರ್ಗದರ್ಶಕ ಮಂಡಳಿಯ ಸಂಯೋಜಕರಾದ ಕಟ್ಟಾಯ ಶಿವಕುಮಾರ್ ಸ್ವಾಗತಿಸಿದರೆ ಕೊನೆಯಲ್ಲಿ ಪ್ರಚಾರ ವಿಭಾಗ ಪ್ರಮುಖರಾದ ಶ್ರೀ ಶ್ರೀನಿವಾಸಗೌಡರು ವಂದಿಸಿದರು.
Subscribe to:
Post Comments (Atom)
No comments:
Post a Comment